ಅಯೋನಿಯಮ್

	ಕ್ಯಾನರಿ ದ್ವೀಪಗಳು, ವರ್ಡೆ ಭೂಶಿರ, ಮಡೆರಿಯ ಮತ್ತು ಉತ್ತರ ಆಫ್ರಿಕ ದೇಶಗಳಲ್ಲಿ ಅಧಿಕವಾಗಿ ಕಾಣುವ ಸಸ್ಯಗಳು (ಕ್ರ್ಯಾಸುಲೇಸಿ). ಕೊಂಬೆಗಳಿರಬಹುದು ಅಥವಾ ಇಲ್ಲದೆ ಬರಿ ಗಟ್ಟಿ ಕಾಂಡವಿರಬಹುದು; ಮೇಲು ಭಾಗದಲ್ಲಿ ಗಾಳಿಬೇರುಗಳು; ಎಲೆಗಳು ಕಾಂಡದ ಮೇಲೆ ಪರ್ಯಾಯರೂಪದಲ್ಲಿ ಅಥವಾ ಗುಲಾಬಿ ಹೂವಿನಂತೆ; ಹೂಗೊಂಚಲುಗಳು ಕಾಂಡದ ತುದಿಯಲ್ಲಿ-ಇವು ಮುಖ್ಯ ವೈಶಿಷ್ಟ್ಯಗಳು. ಈ ಜಾತಿಯ ಸಸ್ಯಗಳು ಹವಾಮಾನದ ತೀವ್ರ ಏರಿಳಿತ ಸಹಿಸುವುದಿಲ್ಲ. ಬೆಂಗಳೂರಿನ ವಾತಾವರಣದಲ್ಲಿ ಸಮೃದ್ಧಿಯಾಗಿ ಬೆಳೆಯಬಹುದು. ಲಿಂಗ (ಬೀಜಗಳಿಂದ) ಮತ್ತು ನಿರ್ಲಿಂಗ (ತುಂಡುಗಳಿಂದ) ಎರಡು ರೀತಿಗಳಿಂದಲೂ ಈ ಸಸ್ಯಗಳನ್ನು ವೃದ್ಧಿಮಾಡಬಹುದು. ಎರಡನೆಯ ರೀತಿಗೆ ಕ್ಷಿಪ್ರವೇಳೆ ಸಾಕು. ಅ.ಅರ್‍ಬೊರೆಯುಮ್, ಅ. ಬಾಲ್‍ಸಮಿಫೆರಮ್, ಅ. ಹವೊರ್‍ತಿ, ಅ. ಲಿಂಡ್‍ಲೆಯಿ ಮತ್ತು ಅ. ಟೆಬ್ಯುಲಿಫೊರ್ಮ್-ಇವು ಅಯೋನಿಯಮ್ಮಿನ ವಿವಿಧ ಪ್ರಭೇದಗಳು.
(ಡಿ.ಎಂ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ